ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬವಳಾಡಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ನ ಸ್ಥಾಪಕ, ಕೊಡುಗೈ ದಾನಿ, ಬೈಂದೂರು ಬಂಟರ ಸಂಘದ ಅಧ್ಯಕ್ಷ ಗೋಕುಲ ಶೆಟ್ಟಿ ಅವರು ತಾವು ಕಲಿತ ಶಾಲೆಯ ಎಲ್.ಕೆ.ಜಿಯಿಂದ 7ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 75,000 ರೂಪಾಯಿ ಮೌಲ್ಯದ ಶಾಲಾ ಸಮವಸ್ತ್ರವನ್ನು ಉಚಿತವಾಗಿ ವಿತರಿಸಿದರು. ಗೋಕುಲ್ ಶೆಟ್ಟಿಯವರು ಮಾತನಾಡುತ್ತಾ, ತಾನು ಕಲಿತ ಈ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬುದು ನನ್ನ ಆಸೆ. ಹಾಗೆಯೇ ಇನ್ನು ಮುಂದೆ ಪ್ರತೀ ವರ್ಷ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರವನ್ನು ಉಚಿತವಾಗಿ ನೀಡಲು ಉತ್ಸಕನಾಗಿದ್ದೇನೆಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ ವಹಿಸಿದ್ದರು.



ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಘುರಾಮ ಶೆಟ್ಟಿ ಗಾಯಾಡಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಾಗರತ್ನ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಎನ್.ಕೆ ಬಿಲ್ಲವ ವೇದಿಕೆಯಲ್ಲಿದ್ದರು. ಮುಖ್ಯೋಪಾಧ್ಯಾಯ ಎನ್.ಕೆ ಬಿಲ್ಲವ ಎಲ್ಲರನ್ನೂ ಸ್ವಾಗತಿಸಿದರು. ಜಿ.ಪಿ.ಟಿ ಶಿಕ್ಷಕ ಸುನಿಲ್ ಕುಮಾರ್ ಎನ್ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಶೇಖರ ಶೆಟ್ಟಿ ವಂದನಾರ್ಪಣೆಗೈದರು.




















































































































