ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಜುಲೈ 25 ಶನಿವಾರ ಬೆಳಿಗ್ಗೆ 11:30 ರಿಂದ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನ, ಮುಂಬಯಿ ವಿಶ್ವವಿದ್ಯಾಲಯ
ವಿದ್ಯಾನಗರಿ ಸಾಂತಕ್ರೂಜ್ (ಪೂ) ಇಲ್ಲಿ ಹಿರಿಯ ಸಾಹಿತಿ, ಕವಿ ಶಿಮುಂಜೆ ಪರಾರಿ ಸಂಸ್ಮರಣೆ ಹಾಗೂ ಅವರ ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ‘ಆತ್ಮದೀಪ್ತಿಯ ಬೆಳಕು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿನ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಹಸ್ತದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದ್ದು, ನಂತರ ಅವರು ಆಶೀರ್ವಚನ ನೀಡಲಿದ್ದಾರೆ. ಅದೇ ರೀತಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿನ ಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಇದೇ ಸಂದರ್ಭದಲ್ಲಿ ಆಶೀರ್ವಚನವನ್ನು ನೀಡಲಿದ್ದಾರೆ. ಶಿಮುಂಜೆ ಅವರ ‘ನಿತ್ಯ ಆನಂದ ವಚನಗಳ ಮಹತ್ವ’ದ ಕುರಿತು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಪ್ರೊ. ಜಿ.ಎನ್ ಉಪಾಧ್ಯ ಅವರು ಮಾತನಾಡಲಿದ್ದಾರೆ. ನವೋದಯ ಕನ್ನಡ ಸೇವಾ ಸಂಘ ಥಾಣೆ ಇಲ್ಲಿನ ಅಧ್ಯಕ್ಷರಾದ ದಯಾನಂದ ಶೆಟ್ಟಿ ಹಾಗೂ ಸಂಘಟಕರಾದ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.




ಶಿಮುಂಜೆ ಅವರ ಸಮಗ್ರ ವಚನಗಳನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಪಾದಿಸಿ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಶಿಮುಂಜೆ ಅವರ ನಿತ್ಯ ಆನಂದ ವಚನಗಳ ಗಾಯನ ಪ್ರಸ್ತುತಿಯನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ ಅವರ ಧರ್ಮಪತ್ನಿ ಚಂದ್ರಿಕಾ ಶೆಟ್ಟಿ ಹಾಗೂ ಮಕ್ಕಳಾದ ಅರ್ಚನ ಶೆಟ್ಟಿ, ಅಪರ್ಣ ಶೆಟ್ಟಿ ಮತ್ತು ಪರಿವಾರದವರು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಶಿಮುಂಜೆ ಪರಾರಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಣೆಯ ಮೂಲಕ ಕೋರಲಾಗಿದೆ.

ಶಿಮುಂಜೆ ಪರಾರಿ ಅವರ ಪೂರ್ಣ ಹೆಸರು ಸೀತಾರಾಮ ಮುದ್ದಣ್ಣ ಶೆಟ್ಟಿ. ಅವರು ಮುಂಬಯಿಯಲ್ಲಿ ಅರಳಿದ್ದ ಪ್ರತಿಭೆ. ಮುಂಬಯಿಯಲ್ಲಿ ನೆಲೆ ನಿಂತು ತುಳು ಕನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರಲ್ಲಿ ಶಿಮುಂಜೆ ಪರಾರಿ ಅವರು ಪ್ರಮುಖರು. ಅವರು ಮುಂಬಯಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿ ಸಾಹಿತ್ಯ ಕೈಂಕರ್ಯವನ್ನು ಮಾಡಿ ಹೆಸರಾದವರು. ಬಹುಭಾಷೆಗಳನ್ನು ಬಲ್ಲ ಅವರು ತಾನು ಓದಿ ಆನಂದಿಸಿದ ಅನ್ಯಭಾಷಾ ಲೇಖಕರ ಸಾಹಿತ್ಯವನ್ನು ತುಳು ಕನ್ನಡ ಬಾಂಧವರೂ ಓದಿ ಆನಂದಿಸಲೆಂಬ ಇಚ್ಛೆಯಿಂದ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಆ ಮೂಲಕ ಅವರು ವಿಭಿನ್ನ ಭಾಷೆಗಳನ್ನಾಡುವ ಜನರ ಹೃದಯಗಳಿಗೊಂದು ಸಂಪರ್ಕ ಸೇತುವೆಯನ್ನು ನಿರ್ಮಿಸಿದರು. ಶಿಮುಂಜೆ ಪರಾರಿ ಅವರು ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿದ್ದರು. ಅವರ ತಂದೆಯೊಂದಿಗೆ ಆಗಾಗ ನಿತ್ಯಾನಂದ ಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತಿದ್ದ ಅವರು ಅದೇ ಅಂಕಿತ ನಾಮದಿಂದ ನಿತ್ಯ ಆನಂದ ವಚನಗಳನ್ನು ಬರೆಯುತ್ತಿದ್ದರು. ಅದು ಐದು ಸಂಪುಟಗಳಲ್ಲಿ ಪ್ರಕಟವಾಗಿದ್ದು ಈಗ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ‘ಆತ್ಮದೀಪದ ಬೆಳಕು’ ಕೃತಿಯನ್ನು ಹೊರ ತರುತ್ತಿದೆ.




















































































































