ತುಳುವ ಮಹಾಸಭೆ ಇಂಟರ್ನ್ಯಾಷನಲ್ ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸುವ ಉದ್ದೇಶದಿಂದ ಜುಲೈ 19 ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಪುತ್ತೂರಿನ ಬಂಟರ ಭವನದಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಗೆ ಪುತ್ತೂರು ವಲಯದ ಪ್ರಧಾನ ಸಂಚಾಲಕರಾದ ಮನೋಹರ ರೈ ಮನವಳಿಕೆ ಅವರು ಸ್ವಾಗತ ಕೋರಿದರು. ಬಳಿಕ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ತುಳುವರ್ಲ್ಡ್ ಫೌಂಡೇಶನ್ನ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಅವರು ತುಳುವರ್ಲ್ಡ್ ಫೌಂಡೇಶನ್ ಮತ್ತು ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಧ್ಯೇಯ, ಉದ್ದೇಶಗಳು ಹಾಗೂ ಚಟುವಟಿಕೆಗಳ ಕುರಿತು ಸಭಿಕರಿಗೆ ವಿವರಿಸಿದರು.
ನಂತರ ನಡೆದ ಚರ್ಚೆಯ ಬಳಿಕ, ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ವೇದಾವತಿ ಪೂಜಾರಿ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ರೈ, ಶ್ರೀಮತಿ ನಯನಾ ರೈ, ಶ್ರೀಮತಿ ಇಂದಿರಾ ರೈ, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಖಜಾಂಚಿಯಾಗಿ ಶ್ರೀಮತಿ ಪುಷ್ಪಲತಾ ಕೆ, ಕಾರ್ಯಕಾರಿ ಸಮಿತಿಯ ಸಲಹೆಗಾರರಾಗಿ ಸದಾಶಿವ ರೈ ದಂಬೆಕ್ಕಾನ, ಚಂದ್ರಹಾಸ ರೈ, ದುರ್ಗಾಪ್ರಸಾದ ರೈ ಕುಂಬ್ರ, ದಯಾನಂದ ರೈ ಮನವಳಿಕೆ ಆಯ್ಕೆಯಾದರು ಹಾಗೂ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ವಸಂತ ರೈ ಕುತ್ತೆತ್ತೂರು ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಸಭೆಯು ಯಶಸ್ವಿಯಾಗಿ ಸಮಾಪ್ತಿಯಾಯಿತು.






















































































































