ಎರಡು ಮಹಾಯುದ್ಧಗಳ ಬಳಿಕ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂದರ್ಭದಲ್ಲಿ 1945ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಶ್ವಸಂಸ್ಥೆ ಆರಂಭಕ್ಕೆ ಸಭೆ ನಡೆಯಿತು. ಆ ಸಭೆಗೆ ವಿವಿಧ ದೇಶಗಳ ಕೆಲವೇ ಕೆಲವು ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ ಆ ಸಭೆಯಲ್ಲಿ ರೋಟರಿ ಸಂಸ್ಥೆಯ 49ಕ್ಕೂ ಹೆಚ್ಚು ಸದಸ್ಯರು ಭಾಗಿಯಾಗಿದ್ದು, ರೋಟರಿ ಸಂಸ್ಥೆಯ ಪ್ರಾಮುಖ್ಯತೆ ತೋರಿಸುತ್ತದೆ ಎಂದು ರೋ. ಬಿ ಶೇಖರ್ ಶೆಟ್ಟಿ ತಿಳಿಸಿದರು. ಆವುತಿ ಗ್ರಾಮದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿಗೂ ವಿಶ್ವ ಸಂಸ್ಥೆಯಲ್ಲಿ ರೋಟರಿಗೆ ಮಹತ್ವದ ಸ್ಥಾನವಿದೆ ಎಂದು ಹೇಳಿದರು. ಸಮಾಜ ಸೇವೆ ಮಾಡುವುದು ಕಷ್ಟ ಎಂದುಕೊಂಡರೆ ಅದು ಕಷ್ಟವೇ ಆಗುತ್ತದೆ. ಅದೇ ಸಮಾಜ ಸೇವೆ ಸುಲಭ ಎಂದು ಭಾವಿಸಿದರೆ ಸುಗಮವಾಗಿ ಕೆಲಸ ಮಾಡಬಹುದು. ಹೀಗಾಗಿ ಬಹುತೇಕ ದೇಶಗಳಲ್ಲಿ ರೋಟರಿ ಸಂಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ಯಾವುದೇ ಸಂಸ್ಥೆಗಳಲ್ಲಿ ಪದಾಧಿಕಾರಿಗಳನ್ನು ಪದಾಧಿಕಾರಿಗಳೇ ದೂರಿಕೊಂಡರೆ ಆ ಸಂಘಟನೆಗಳು ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಸಮಾನ ಮನಸ್ಸಿನಿಂದ ಕೆಲಸ ಮಾಡುವಂತಾಗಬೇಕು. ಆವುತಿ ಎಂಬ ಸಣ್ಣ ಊರಿನಲ್ಲಿ ರೋಟರಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು. ವಿವಿಧ ಸಮಾಜಮುಖಿ ಕೆಲಸಗಳ ಜೊತೆಗೆ ಪೋಲಿಯೋ ನಿರ್ಮೂಲನೆಗೆ ಪಣತೊಟ್ಟಿದ್ದು ರೋಟರಿ ಸಂಸ್ಥೆ. ಹೀಗಾಗಿ ಇಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡು ದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದೇಶಗಳಲ್ಲಿಯೂ ಪೋಲಿಯೋ ನಿರ್ಮೂಲನೆಯಾಗಿದೆ. ಸಮಾಜಕ್ಕೆ ಒಳಿತಾಗುವಂತ ಕೆಲಸಗಳಿಗೆ ರೋಟರಿ ಸಂಸ್ಥೆಗಳು ಒತ್ತು ನೀಡಬೇಕು ಎಂದು ಕರೆ ನೀಡಿದರು. ರೋಟರಿ ಸಂಸ್ಥೆ ಸದಸ್ಯರಾದ ತಕ್ಷಣ ಏನೂ ಸಿಗುವುದಿಲ್ಲ. ಸ್ವಾರ್ಥ ಮೀರಿದ ಸೇವೆಯೇ ರೋಟರಿ. ರೋಟರಿ ಸಂಸ್ಥೆ ನಮಗೆ ಜೀವನದಲ್ಲಿ ಸಾರ್ಥಕತೆ ನೀಡುತ್ತದೆ. ಹೀಗಾಗಿ ನಮ್ಮೊಂದಿಗೆ ಇನ್ನೊಂದಿಷ್ಟು ಜನರನ್ನು ರೋಟರಿ ಸಂಸ್ಥೆಗೆ ಕರೆತರುವ ಕೆಲಸ ಮಾಡಬೇಕು ಆಗ ಇನ್ನೊಂದಿಷ್ಟು ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.



ಆವುತಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ಶಾಂತೇಗೌಡ ಮಾತನಾಡಿ, ಕಳೆದ ಅವಧಿಯಲ್ಲಿ ನಮ್ಮ ಸಂಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡಿದೆ. ರೋಟರಿ ನಿಕಟ ಪೂರ್ವ ಅಧ್ಯಕ್ಷ ಮಹೇಂದ್ರ ಮಾತನಾಡಿ, ಮೊದಲು 20 ಜನ ಸೇರಿ ರೋಟರಿ ಸಂಸ್ಥೆ ಆರಂಭಿಸುವ ಬಗ್ಗೆ ಚರ್ಚೆ ಮಾಡಿದ್ದೆವು. ನಂತರ ಸದಸ್ಯತ್ವಕ್ಕೆ ಮುಂದಾದಾಗ 45 ಮಂದಿ ಸಂಸ್ಥೆಗೆ ಸದಸ್ಯರಾದರು. ಅಂದಿನಿಂದ ಇಂದಿನವರೆಗೆ ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದೇವೆ. ನಾವು ಹೊಸದಾಗಿ ರೋಟರಿ ಸಂಸ್ಥೆ ಆರಂಭಿಸಿದ್ದರಿಂದ ವಿವಿಧ ರೋಟರಿ ಕ್ಲಬ್ ಗಳಿಗೆ ತೆರಳಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಗಮನಿಸಿದ್ದೆವು. ಅದೇ ಮಾದರಿಯಲ್ಲಿಯೇ ನಾವು ಕೆಲಸ ಮಾಡುತಿದ್ದೇವೆ ಎಂದು ಮಾಹಿತಿ ನೀಡಿದರು. ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಶಾಂತೇಗೌಡ, ಕಾರ್ಯದರ್ಶಿಯಾಗಿ ಎಚ್. ಟಿ.ಉಮೇಶ್ ಪದಗ್ರಹಣ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಪ್ರಮುಖರಾದ ಎಸ್ ಗಣೇಶ್, ಯು.ವಿ ಪ್ರಕಾಶ್, ಬಿ.ಸಿ ಪ್ರಥಮ್, ಎಚ್.ಟಿ ಉಮೇಶ್ ಇದ್ದರು.




















































































































