ವಕೀಲಿಕೆ ಮೂಲಕ ನ್ಯಾಯದಾನ ಕೊಡಿಸುವುದು ಅದ್ಭುತವಾದ ವೃತ್ತಿ. ಆದರೆ ವೃತ್ತಿಯಲ್ಲಿ ಬಹು ಮುಖ್ಯವಾಗಿ ಧೈರ್ಯ ಬೇಕು. ಧೈರ್ಯವಿಲ್ಲದಿದ್ದರೆ ಕಷ್ಟ. ಹಾಗೆಯೇ ಸ್ವಾತಂತ್ರ್ಯವೂ ಇದೆ. ಅಷ್ಟೇ ಸವಾಲುಗಳು ಕೂಡಾ ಇದೆ. ಈಗ ಎಐ ತಂತ್ರಜ್ಞಾನ ಬಳಸಿಕೊಂಡು ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಎಂ.ಐ ಅರುಣ್ ಹೇಳಿದರು. ಅವರು ಕುಂದಾಪುರ ಕೋರ್ಟ್ ಸಭಾಂಗಣದಲ್ಲಿ ರಾಜ್ಯ ವಕೀಲರ ಸಂಘದ ಸದಸ್ಯೆಯಾಗಿ ಆಯ್ಕೆಯಾದ ಕುಂದಾಪುರದ ಶ್ಯಾಮಲಾ ಭಂಡಾರಿ ಅವರಿಗೆ ಕುಂದಾಪುರ ವಕೀಲರ ಸಂಘದ ವತಿಯಿಂದ ನಡೆದ ಅಭಿನಂದನೆ ನೆರವೇರಿಸಿ ಮಾತನಾಡಿದರು. ವಕೀಲರ ಸಂಘದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕಾನೂನು ವಿದ್ಯಾರ್ಥಿಗಳು ವಕೀಲ ವೃತ್ತಿ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಒಳ್ಳೆಯ ಜೂನಿಯರ್ ವಕೀಲರಿಗೆ ಬೇಡಿಕೆಯಿದೆ. ಅದಕ್ಕಾಗಿ ಎಲ್ಲಾ ಕಡೆ ನಿರಂತರ ಕಾನೂನು ಮಾಹಿತಿ ಕಾರ್ಯಾಗಾರ ನಡೆಸಿ ಎಂದರು.



ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಲೋಕಾಯುಕ್ತ ದಾಳಿ ಮಾತ್ರ ಆಗುತ್ತಿದ್ದು, ಶಿಕ್ಷೆ ಕಮ್ಮಿಯಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರದಲ್ಲಿ ಎಲ್ಲರೂ ಹೆಚ್ಚು ಕಾಳಜಿ ವಹಿಸಬೇಕಾಗಿದ್ದು, ಸರಕಾರಿ ಕಚೇರಿಯಲ್ಲಿ ಭಯ ಮೂಡಬೇಕಾಗಿದೆ. ಜನಸಾಮಾನ್ಯರ ಸಮಸ್ಯೆ ಪರಿಹಾರ ಆಗಬೇಕಾದರೆ ತ್ವರಿತ ಗತಿಯ ನ್ಯಾಯ ದಾನ ಆಗಬೇಕಾಗಿದೆ ಎಂದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಶ್ಯಾಮಲಾ ಭಂಡಾರಿಯವರ ಈವರೆಗಿನ ಸಾಧನೆ ಹಿಂದೆ ಸುದೀರ್ಘ ಹೋರಾಟವಿದೆ. ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡಿದ್ದಾರೆ. ವೃತ್ತಿ ಉದ್ಯಮದಲ್ಲಿ ಪೈಪೋಟಿ ಯುಗವಿದು. ಆದರೆ ಅದು ಆರೋಗ್ಯಕರ ಆಗಿರಬೇಕು. ಇವರದು ಆರೋಗ್ಯಕರ ಪೈಪೋಟಿಯಾಗಿದ್ದು, ಚುನಾವಣೆಯಲ್ಲೂ ನೈತಿಕತೆಯಿಂದ ಗೆದ್ದಿದ್ದಾರೆ ಎಂದರು. ರಾಜ್ಯ ಸಮಿತಿ ಸದಸ್ಯೆ ಶ್ಯಾಮಲಾ ಭಂಡಾರಿ ಅಭಿನಂದನೆ ಸ್ವೀಕರಿಸಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಮಾತನಾಡಿದರು.
ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಜೆ ರಾವ್ ಸ್ವಾಗತಿಸಿ, ವಕೀಲರಾದ ಟಿ.ಬಿ ಶೆಟ್ಟಿ ಪ್ರಾಸ್ತಾವಿಸಿದರು. ಸಂತೋಷ್ ಶೆಟ್ಟಿ, ಮಲ್ಯಾಡಿ ಜಯರಾಮ ಶೆಟ್ಟಿ, ವಿಕಾಸ ಹೆಗ್ಡೆ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪರಿಚಯಿಸಿದರು. ವಕೀಲ ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪಿ ಜಯಚಂದ್ರ ಶೆಟ್ಟಿ ವಂದಿಸಿದರು.




















































































































