ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇವರ ತವರೂರಿನ ಪ್ರಸಿದ್ದ ಕಲಾವಿದರ ಮುಂಬಯಿ ಪ್ರವಾಸದ ಸರಣಿ ತಾಳಮದ್ದಲೆಗಳ ಕಾರ್ಯಕ್ರಮದ ಉದ್ಘಾಟನೆಯು ಜುಲೈ 11 ಶನಿವಾರದಂದು ಜೂಹಿ ನಗರದಲ್ಲಿರುವ ಬೋಂಬೆ ಬಂಟ್ಸ್ ಅಸೋಸಿಯೇಶನ್ ಬಂಟ್ಸ್ ಸೆಂಟರ್ ಸಭಾಂಗಣದಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಘನ ಅಧ್ಯಕ್ಷತೆ ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಗೌರವ ಉಪಸ್ಥಿತಿ, ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿಯವರ ಮುತುವರ್ಜಿಯಲ್ಲಿ ಬಹಳ ಅದ್ದೂರಿಯಿಂದ ನಡೆಯಿತು. ಹನುಮಗಿರಿ ಯಕ್ಷಗಾನ ಮೇಳದ ಯುವ ಭಾಗವತ ಚಿನ್ಮಯ ಭಟ್ ಕಲ್ಲಡ್ಕರವರ ಪ್ರಾರ್ಥನೆಯಿಂದ, ಕಾರ್ಯಕ್ರಮವನ್ನು ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಎನ್ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷರು, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.



ಆದ್ಯಪಾಡಿ ಬಾಲಕೃಷ್ಣ ಶೆಟ್ಟಿಯವರು ಕಲಾವಿದರಾದ ಭಾಗವತ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮತ್ತು ಮದ್ದಲೆ ವಾದಕರಾದ ಪ್ರಶಾಂತ ಶೆಟ್ಟಿ ವಗೆನಾಡು, ಕೌಶಲ್ ರಾವ್ ಪುತ್ತಿಗೆ, ಅರ್ಥದಾರಿಗಳಾದ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬಳಂತಿಮೊಗರು, ಅವಿನಾಶ್ ಶೆಟ್ಟಿ ಉಬರಡ್ಕ, ಪ್ರಸಾದ್ ಸವಣೂರು, ಸುನೀಲ್ ಹೊಲಾಡು ಇವರುಗಳನ್ನು ಪರಿಚಯಿಸಿ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಲು, ಪುಷ್ಪಗುಚ್ಛಗಳೊಂದಿಗೆ ಗೌರವಿಸಿದರು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು.


ಬೋಂಬೆ ಬಂಟ್ಸ್ ಅಸೋಸಿಯೇಷನ್ ಪ್ರಾಯೋಜತ್ವಕದಲ್ಲಿ ತವರೂರ ಕಲಾವಿದರಿಂದ ‘ಸುದರ್ಶನ ವಿಜಯ’ ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಲೆ ನಡೆಯಿತು. ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮತ್ತು ಮದ್ದಲೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು, ಕೌಶಲ್ ರಾವ್ ಪುತ್ತಿಗೆ ಭಾಗವಹಿಸಿದರೆ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಸುದರ್ಶನಾಗಿ, ಹರೀಶ್ ಭಟ್ ಬಳಂತಿಮೊಗರು ವಿಷ್ಣುವಾಗಿ, ಅವಿನಾಶ್ ಶೆಟ್ಟಿ ಉಬರಡ್ಕ ಶತ್ರುಪ್ರಸೂದನಾಗಿ, ಪ್ರಸಾದ್ ಸವಣೂರು ಲಕ್ಷಿಯಾಗಿ ಮತ್ತು ಸುನೀಲ್ ಹೊಲಾಡು ದೇವೇಂದ್ರನಾಗಿ ಪಾತ್ರಗಳನ್ನು ನಿಭಾಯಿಸಿದರು. ಪಾಂಡಿತ್ಯಪೂರ್ಣ ವಾಕ್ಚಾತುರ್ಯದಿಂದ ಅರ್ಥದಾರಿಗಳು ಕಲಾ ರಸಿಕರನ್ನು ರಂಜಿಸಿ ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿ ಬಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಉಪಸಮಿತಿ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಗಣ್ಯರು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




















































































































