

ಸುತ್ತಲೂ ನೀರು. ಮಧ್ಯದಲ್ಲೊಂದು ಸಂಭ್ರಮ ಲೋಕ. 5 ದಿನ ಕಳೆದದ್ದೇ ಗೊತ್ತಾಗಿಲ್ಲ.ಅಯ್ಯೋ ಮುಗಿದು ಹೋಯಿತಲ್ಲಾ ಇಂಥದ್ದೊಂದು ಮಧುರ ಕ್ಷಣ ಎಂದು ಆ ಸಂಭ್ರಮ ಲೋಕವನ್ನು ಬಿಟ್ಟು ಬರಲು ಮನಸ್ಸಾಗದೆ ಬೇಸರಿಸಿಕೊಂಡವರೇ ಹೆಚ್ಚು. ಏನು ಹೇಳುತ್ತೇವೆಂದು ಗೊತ್ತಾಗಿಲ್ಲ ತಾನೇ? ಇದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಮತ್ತು ತ್ರಿರಂಗ ಸಂಗಮ ಮುಂಬಯಿ ವತಿಯಿಂದ ಕಲಾವಿದರು ಹಾಗೂ ಅವರ ಕುಟುಂಬ ಸದಸ್ಯರಿಗೆ ಏರ್ಪಡಿಸಿದ ‘ಸಮುದ್ರಯಾನ’ ಎಂಬ ಪ್ರವಾಸದ ಬಗ್ಗೆ ಪ್ರವಾಸಿಗರ ಅನುಭವ. ಮಂಗಳೂರಿನಿಂದ ಸುಮಾರು 300 ಮಂದಿ ಹಾಗೂ ಮುಂಬಯಿಯಿಂದ ಸುಮಾರು 340 ಮಂದಿ ಸೇರಿ ಸುಮಾರು 640 ಮಂದಿಗೆ 5 ದಿನಗಳ ಕಾಲ ಲಕ್ಷದ್ವೀಪ ಪ್ರವಾಸವನ್ನು ಕೋರ್ಡೆಯಿಲಾ ಎಂಬ ವಿಲಾಸಿ ಹಡಗಿನಲ್ಲಿ ಆಯೋಜಿಸಲಾಗಿತ್ತು. ಈ 5 ದಿನಗಳ ಕಾಲ ಎಲ್ಲರೂ ಮೊಬೈಲ್ ಬದಿಗಿಟ್ಟು ಜೋಷ್ ಮಾಡಿದ್ದೇ ಮಾಡಿದ್ದು. ಹೆಚ್ಚಿನ ಕಾಲವನ್ನು ಕಳೆದದ್ದು ಹಡಗಿನಲ್ಲಿಯೇ. ಅಂಥ ಹಡಗಿನಲ್ಲಿ ಬಹುತೇಕರಿಗೆ ಇದು ಮೊದಲ ಪ್ರವಾಸದ ಅನುಭವ. ಹೆಚ್ಚಿನವರು ಕುಟುಂಬದ ಜತೆಯಲ್ಲೇ ಇದ್ದ ಕಾರಣ ಮನೆಯ ಚಿಂತೆಯೂ ಇರಲಿಲ್ಲ. ವಿವಿಧ ಕಲಾಪ್ರಕಾರಗಳ ಪ್ರದರ್ಶನ, ಆಟ, ಮೋಜು, ಬೇಕು ಬೇಕಾದ ಆಹಾರ, ಪಾನೀಯ, ಮದ್ಯ ಎಲ್ಲವೂ ಇಲ್ಲಿತ್ತು. ಹಡಗಿನ ವಿಲಾಸಿತನವೂ ಭರ್ಜರಿಯಾಗಿತ್ತು. ಇವೆರಡೂ ಸೇರಿ ಒಂದು ಪುಟ್ಟ ಸ್ವರ್ಗಲೋಕದ ಅನುಭವ. ಈ ವಿಲಾಸಿ ಹಡಗಿನಲ್ಲೂ ಅದರಲ್ಲೇ ಆದಂಥ ಕಲಾವಿದರ ತಂಡವಿತ್ತು. ಅವರಿಂದ ವಿವಿಧ ರೀತಿಯ ಡ್ಯಾನ್ಸ್, ಜಾದೂ, ನಾಟಕ ಮುಂತಾದವುಗಳು ಪ್ರದರ್ಶನಗೊಂಡವು. ನೋಡಿ ಎಲ್ಲರೂ ಖುಷಿಪಟ್ಟರು.



ಹಡಗಿನಲ್ಲಿ ಇದ್ದಂಥ ಸಭಾಂಗಣದಲ್ಲಿ ಇವೆಲ್ಲವೂ ನಡೆಯುತ್ತಿದ್ದವು. ಪಾವಂಜೆ ಮೇಳದ ಕಲಾವಿದರಿಂದ ಎರಡು ಯಕ್ಷಗಾನ ಪ್ರದರ್ಶನವೂ ನಡೆಯಿತು. “ದೇವಿಮಹಾತ್ಮೆ” ಮತ್ತು “ಸಮುದ್ರ ಮಥನ”. ಅಲೆಯಲ್ಲಿ ತೇಲುತ್ತಾ ಸಾಗುತ್ತಿದ್ದ ಹಡಗಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಎಲ್ಲರೂ ಮೆಚ್ಚುವಂಥ ಎರಡು ಪ್ರದರ್ಶನ ನೀಡಲಾಗಿತ್ತು. ಹಡಗಿನ ಸಿಬ್ಬಂದಿಗಳೂ ಹಾಗೂ ಇತರ ಕೆಲವರೂ ಯಕ್ಷಗಾನ ನೋಡಿ ಖುಷಿಪಟ್ಟರು. ಅವರಿಗೂ ನಮ್ಮ ಯಕ್ಷಗಾನವನ್ನು ನೋಡಿ ಆಸ್ವಾದಿಸುವ ಅವಕಾಶ ಸಿಕ್ಕಿತ್ತು. ಸುಮಾರು 2,500 ಜನರ ಸಾಮರ್ಥ್ಯವಿರುವ ಈ ವಿಲಾಸಿ ಹಡಗಿನಲ್ಲಿ ಹಲವು ಲಿಫ್ಟ್ಗಳಿದ್ದವು. ಎ.ಸಿ. ರೂಮ್ಗಳು, ರೆಸ್ಟೋರೆಂಟ್ಗಳೂ ಇದ್ದವು. ಅತ್ಯಂತ ಸ್ವಚ್ಛತೆಯನ್ನು ಕಾಪಾಡಲಾಗಿತ್ತು. ಈ ತಂಡದಲ್ಲಿದ್ದ ಕಲಾವಿದರಿಗೆ ದಾನಿಗಳಾದ ಹೇರಂಭಾದ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ, ಭವಾನಿ ಶಿಪ್ಪಿಂಗ್ಸ್ನ ಸಿಎಂಡಿ ಕೆ.ಡಿ. ಶೆಟ್ಟಿ, ಶಶಿ ಕ್ಯಾಟರಿಂಗ್ ನ ಮಾಲಕರಾದ ಬರೋಡ ಶಶಿಧರ ಶೆಟ್ಟಿ ಮತ್ತು ಎಂಆರ್ ಜಿ ಗ್ರೂಪ್ ನ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿ ಮುಂತಾದವರ ಪ್ರಾಯೋಜಕತ್ವದಲ್ಲಿ ದೊಡ್ಡ ಮೊತ್ತದ ಬಹುಮಾನಗಳನ್ನೂ ನೀಡಲಾಗಿತ್ತು. ಕಲಾವಿದರೆಲ್ಲರೂ ಅತ್ಯಂತ ಖುಷಿ ಮತ್ತು ವಿಧೇಯತೆಯಿಂದ ಈ ಬಹುಮಾನವನ್ನು ಸ್ವೀಕರಿಸಿಕೊಂಡರು.
ಲಕ್ಷದ್ವೀಪದಲ್ಲಿ ಸಮುದ್ರಸ್ನಾನ : ನೀರಲ್ಲಿ ತೇಲುತ್ತಾ ತೇಲುತ್ತಾ ಹಡಗು ಲಕ್ಷದ್ವೀಪ ತಲುಪಿದ್ದು ಬಹುತೇಕರಿಗೆ ಗೊತ್ತಾಗಲೇ ಇಲ್ಲ. ಅಲ್ಲಿ ಇಳಿದು ಸಮುದ್ರ ಸ್ನಾನ ಮಾಡಿಕೊಂಡ ಈ ಪ್ರವಾಸಿಗರು, ಫೋಟೋ ತೆಗೆಸಿಕೊಂಡು ಈ ಸಂಭ್ರಮದ ಕ್ಷಣವನ್ನು ದಾಖಲೀಕರಿಸಿಕೊಂಡರು. ಲಕ್ಷದ್ವೀಪದಿಂದ ಹಡಗು ವಾಪಸ್ ಮುಂಬಯಿ ಕಡೆಗೆ ಹೊರಟಾಗ ಎಲ್ಲರಿಗೂ ಒಂದು ರೀತಿಯ ಬೇಸರ. ಇನ್ನೂ ಕೆಲವು ದಿನ ಇರಬೇಕಿತ್ತಪ್ಪಾ ಇದೇ ರೀತಿ ಎಂದು ಅವರೆಲ್ಲರೂ ಹೇಳುತ್ತಿದ್ದರು. ಮಂಗಳೂರಿನಿಂದ ರೈಲಿನ ಮೂಲಕ ಮುಂಬಯಿಗೆ ಹೋಗಿ, ಅಲ್ಲಿಂದ ಹಡಗಿನ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣ. ಸಮುದ್ರಯಾನದುದ್ದಕ್ಕೂ ಖುಷಿಯೋ ಖುಷಿ. ದಿನ ಕಳೆದದ್ದೇ ಗೊತ್ತಾಗಲಿಲ್ಲ. ಯಾರಿಗೂ ಮೊಬೈಲ್ ಬೇಡವೇ ಬೇಡವಾಗಿತ್ತು. ಬಹುತೇಕರು ಬದುಕಿನಲ್ಲಿ ಬಂದಿದ್ದ ಮೊದಲ ಈ ಅನುಭವವನ್ನು ಕಿಂಚಿತ್ತೂ ಲೋಪವಾಗದಂತೆ ಆಸ್ವಾದಿಸಿಕೊಳ್ಳುತ್ತಿದ್ದರು. ತಂಡದಲ್ಲಿ ಕೆಲವು ಮಕ್ಕಳೂ ಇದ್ದು, ಅವರ ಖುಷಿಯನ್ನು ವಿವರಿಸಲು ಶಬ್ದಗಳೇ ಇಲ್ಲ.
ಮುಂದಿದೆ ಆಕಾಶ ಯಾನ ಯೋಜನೆ : ಸಮುದ್ರ ಯಾನ ಯೋಜನೆಯು ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ, ಉದ್ಯಮಿ ಬರೋಡಾ ಶಶಿಧರ ಶೆಟ್ಟಿಯವರ ಕನಸು. ಅವರ ಕನಸಿಗೆ ನೀರೆರದವರು ಪಟ್ಲ ಸತೀಶ್ ಶೆಟ್ಟಿ, ತ್ರಿರಂಗ ಸಂಗಮ ಮುಂಬಯಿ ಇದರ ಸಂಚಾಲಕ ಕರ್ನೂರು ಮೋಹನ್ ರೈ ತಂಡ. ಸಮುದ್ರದಲ್ಲೂ ಆಟ ಮಾಡಬೇಕು, ಆಕಾಶದಲ್ಲೂ ಯಕ್ಷಗಾನ ಪ್ರದರ್ಶಿಸಬೇಕು ಎಂಬುದು ಬರೋಡ ಶಶಿಧರ ಶೆಟ್ಟಿ ಅವರ ಕನಸಾಗಿತ್ತು. ಅದರಲ್ಲಿ ಈಗ ಸಮುದ್ರಯಾನ ಯಶಸ್ವಿಯಾಯಿತು. ಮುಂದೆ ವಿಮಾನ ಮೂಲಕ ಆಕಾಶ ಯಾನ ಮಾಡುವ ಯೋಜನೆ ಇದೆ. ವಿಮಾನದಲ್ಲಿ ಯಕ್ಷಗಾನ ಪ್ರದರ್ಶಿಸಬೇಕು ಎಂಬ ಆಸೆಯಂತೆ. ಆದರೆ ಅದು ಹೇಗೆ ಕಾರ್ಯಗತವಾಗುತ್ತದೆ ಎಂಬ ಕುತೂಹಲವೂ ಇದೆ. ಅಂತೂ “ಸಮುದ್ರಯಾನ” ಎಂಬ ಈ ಪ್ರವಾಸವು ಹೊಸ ದಾಖಲೆಯಾಗಿದ್ದು, ಭಾಗವಹಿಸಿದ ಪ್ರತಿಯೊಬ್ಬರೂ ಅತ್ಯಂತ ಖುಷಿಯಿಂದ ಪ್ರವಾಸವನ್ನು ಅನುಭವಿಸಿಕೊಂಡರು. ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದಷ್ಟು ಕಡಿಮೆಯೇ. ಮಂಗಳೂರಿನಿಂದ ಸುಮಾರು 300 ಜನರನ್ನು ಒಟ್ಟು ಸೇರಿಸುವ ಜವಾಬ್ದಾರಿಯನ್ನು ಪ್ರದೀಪ್ ಆಳ್ವ ಕದ್ರಿ ವಹಿಸಿಕೊಂಡು ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಕೃತಜ್ಞತೆಗಳು
ಬರಹ : ಬಾಳ ಜಗನ್ನಾಥ ಶೆಟ್ಟಿ (ಪತ್ರಕರ್ತ)
ಸಂಘಟನಾ ಕಾರ್ಯದರ್ಶಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)





























































































































