

ಮನೆಯ ಕಡೆಗೆ ಗಮನ ಕೊಟ್ಟು ಸಂಸಾರವನ್ನು ಪ್ರೀತಿಸುವವಳು ಹೆಣ್ಣು. ಆಧುನಿಕ ಯುಗದಲ್ಲಿ ಅವಳು ಸಮಾನತೆಯ ಹಕ್ಕುಗಳನ್ನು ಅನುಭವಿಸುವಾಗ ತನ್ನ ಕರ್ತವ್ಯದ ಕಡೆಗೂ ಗಮನ ಹರಿಸಬೇಕು ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿಯವರು ಹೇಳಿದರು. ಮಾರ್ಚ್ 21ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಆಚರಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಡು ಹೆಣ್ಣು ಒಬ್ಬರನ್ನೊಬ್ಬರು ಅರಿತು ಬದುಕಿದಾಗ ಮಾತ್ರ ಜೀವನ ಹಾಗೂ ಸಂಸಾರ ಉತ್ತಮ ರೀತಿಯಲ್ಲಿ ನಡೆಯಲು ಸಾಧ್ಯ. ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾಳೆ ಆದರೆ ಅವಳದೇ ಆದ ಮಹತ್ವದ ಕರ್ತವ್ಯಗಳನ್ನು ಅವಳು ಎಂದಿಗೂ ಮರೆಯಬಾರದು ಕನ್ನಡ ವೆಲ್ಫೇರ್ ಸೊಸೈಟಿಯ ಸಮಾಜಪರ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ನಾಡು ನುಡಿಯ ಬಲವರ್ಧನೆಗೆ ಸಂಸ್ಥೆ ಮಾಡುತ್ತಿರುವ ಸೇವೆ ಅನುಕರಣೀಯವಾಗಿದೆ ಎಂದರು.


ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬಾಬಾಸ್ ಗ್ರೂಪ್ ಆಫ್ ಕಂಪೆನೀಸ್ ಇದರ ಆಡಳಿತ ನಿರ್ದೇಶಕ ಮಹೇಶ್ ಎಸ್ ಶೆಟ್ಟಿ, ಉದ್ಯಮಿ ವೆಲ್ಕಮ್ ಪ್ಯಾಕೇಜ್ ಇದರ ಆಡಳಿತ ನಿರ್ದೇಶಕ ರವೀಂದ್ರನಾಥ್ ಎಂ. ಭಂಡಾರಿ ಅವರು ಮಾತನಾಡಿ ಶುಭ ಹಾರೈಸಿದರು. ಅತಿಥಿಯಾಗಿ ಪಾಲ್ಗೊಂಡ ಸಮಾಜ ಸೇವಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿಯ ಸದಸ್ಯೆಯಾಗಿದ್ದು ಇಂದು ನನ್ನನ್ನು ಅತಿಥಿಯಾಗಿ ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದೇ ಸಂದರ್ಭ ಸೊಸೈಟಿಯ ಮಹಿಳಾ ವಿಭಾಗದ ಸದಸ್ಯೆ ಸಮಾಜ ಸೇವಕಿ ವಿಮಲಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ವಿಮಲಾ ಶೆಟ್ಟಿಯವರು, ಕನ್ನಡ ವೆಲ್ಫೇರ್ ಸೊಸೈಟಿಯು ನನಗೆ ಅತ್ಯಂತ ಪ್ರೀತಿಯ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ನನಗೆ ಕೆಲಸ ಮಾಡಲು ಅತ್ಯಂತ ಸಂತೋಷವಾಗುತ್ತಿದೆ. ಇಂದು ನನಗೆ ನೀಡಿದ ಸಮ್ಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಂಗ ನಿರ್ದೇಶಕ ಅಶೋಕ್ ಕೊಡ್ಯಡ್ಕ ಹಾಗೂ ರಂಗ ಕಲಾವಿದ ಶ್ರೀಕಾಂತ್ ಶೆಟ್ಟಿಯವರನ್ನು ಗೌರವಿಸಲಾಯಿತು. ಪ್ರಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಅತಿಥಿ ಗಣ್ಯರನ್ನು ಸ್ವಾಗತಿಸಿ, ಮಹಿಳಾ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಮಲ್ಲಿಕಾ ಶೆಟ್ಟಿ ಮತ್ತು ತಾರಾ ರೈ ಅವರ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯಲಕ್ಷ್ಮೀ ಹಾಗೂ ಪ್ರಮೀಳಾ ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿದರು. ವಸಂತಿ ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಲ್ಲಿಕಾ ಶೆಟ್ಟಿ ಅವರು ವಂದಿಸಿದರು. ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಪ್ರಮೀಳಾ ಆರ್. ಶೆಟ್ಟಿ, ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ, ಕೋಶಾಧಿಕಾರಿ ಧನ್ಯಕ್ಷಿ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ಇಂದಿರಾ ವಿ ಪೂಜಾರಿ, ಜತೆ ಕೋಶಾಧಿಕಾರಿ ಉಷಾ ಎಚ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿಯ ಸದಸ್ಯರಿಂದ ಅಶೋಕ್ ಕೊಡ್ಯಡ್ಕ ಅವರ ನಿರ್ದೇಶನದಲ್ಲಿ ಚಿಲಿಪಿಲಿ ಶಾಲೆಡ್ ಕಿರಿಕಿರಿ ಜೋಕುಲು ಕಿರು ಹಾಸ್ಯ ಪ್ರಹಸನ ಹಾಗೂ ಯುವ ವಿಭಾಗ ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.

























































































































