ದಕ್ಷಿಣ ಕನ್ನಡ ಸಂಸತ್ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ರಕ್ಷಣಾ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾದ ರಾಜ್ ನಾಥ ಸಿಂಗ್ ಹಾಗೂ ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ ಸೇಠ್ ಅವರ ಅಧ್ಯಕ್ಷತೆಯ ಸಲಹಾ ಸಮಿತಿಯಲ್ಲಿ ಲೋಕಸಭೆಯ 14 ಹಾಗೂ ರಾಜ್ಯಸಭೆಯ 6 ಸದಸ್ಯರಿರುತ್ತಾರೆ. ಮಾತ್ರವಲ್ಲದೇ ಇಬ್ಬರು ಪದನಿಮಿತ್ತ ಸದಸ್ಯರು ಇರುತ್ತಾರೆ. ಲೋಕಸಭೆಯಲ್ಲಿ ಆಯ್ಕೆಯಾದ ಸದಸ್ಯರ ಪೈಕಿ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ಕೂಡಾ ಒಬ್ಬರು.
ರಕ್ಷಣಾ ಸಚಿವಾಲಯದ ಈ ಸಲಹಾ ಸಮಿತಿಯು ಸರ್ಕಾರದ ರಕ್ಷಣಾ ನೀತಿಗಳು, ವಿವಿಧ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ವಿಧಾನ ಹಾಗೂ ದೇಶದ ರಕ್ಷಣೆಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಆಗಾಗ ಸಭೆ ನಡೆಸಿ ಸೂಕ್ತ ಸಲಹೆ ನೀಡಲಿದೆ. ಒಟ್ಟಾರೆ ರಾಷ್ಟ್ರದ ಭದ್ರತೆಯನ್ನು ಬಲಪಡಿಸುವ ರಕ್ಷಣಾ ನೀತಿಗಳ ರಚನೆ ಮತ್ತು ಅನುಷ್ಠಾನಕ್ಕೆ ಸೂಕ್ತ ಮಾರ್ಗದರ್ಶನ ಕೊಡಲಿದೆ. ಈ ಕುರಿತು ಪ್ರತಿಕ್ರಿಯಿಸುವ ಕ್ಯಾ. ಚೌಟ ನಮ್ಮ ರಾಷ್ಟ್ರ ಮತ್ತು ರಕ್ಷಣಾ ಕ್ಷೇತ್ರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯಿಂದ ಸ್ವಾವಲಂಬಿತಯಾಗುವತ್ತ ದಾಪುಗಾಲು ಹಾಕುತ್ತಿರುವ ಸಮಯದಲ್ಲಿ ರಕ್ಷಣಾ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯನಾಗಿ ನೇಮಕಗೊಂಡಿರುವುದು ನನಗೆ ಗೌರವದ ವಿಚಾರವಾಗಿದೆ. ಒಬ್ಬ ಯೋಧನಾಗಿ, ಸಂಸತ್ತಿನ ಸದಸ್ಯನಾಗಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಈ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಸುಯೋಗ ಎಂದು ಹೇಳಿದ್ದಾರೆ.