“ಬಂಟ ಸಮಾಜ ಒಗ್ಗಟ್ಟಿನಿಂದಿರುವುದು ಅನಿವಾರ್ಯ” – ಕನ್ಯಾನ ಸದಾಶಿವ ಶೆಟ್ಟಿ
ಗುರುಪುರ ಬಂಟರ ಮಾತೃಸಂಘದ “ದಶಮಾನೋತ್ಸವ ಸಮಾರಂಭ”ವು ವಾಮಂಜೂರಿನ ‘ಚರ್ಚ್ ಸಭಾಂಗಣ’ದಲ್ಲಿ ದಿನಾಂಕ 16-07-2023ನೇ ಆದಿತ್ಯವಾರದಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.), ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು, ಬೆಂಗಳೂರು ಬಂಟರ ಸಂಘ (ರಿ.), ಹಾಗೂ ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಮಂಗಳೂರು ಇದರ ಸಹಯೋಗದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ಯಾನ ಸದಾಶಿವ ಶೆಟ್ಟಿಯವರು “ಬಂಟ ಸಮಾಜ ಒಗ್ಗಟ್ಟಿನಿಂದ ಇರಬೇಕು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಸುಸಜ್ಜಿತವಾದ ಬಂಟರ ಭವನ ನಿರ್ಮಾಣ ಆಗಬೇಕು. ಇದಕ್ಕಾಗಿ ನಾನು ಸಮಾಜದ ಪ್ರಮುಖರನ್ನು ಸೇರಿಸಿ ಅತೀ ಶೀಘ್ರದಲ್ಲಿ ಒಂದು ಸಭೆಯನ್ನು ಕರೆದು ದೊಡ್ಡ ಮಟ್ಟದ ಸಮಾಲೋಚನೆಯನ್ನು ಮಾಡಿ ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತೇನೆ” ಎಂಬ ಭರವಸೆಯನ್ನು ನೀಡಿದರು.
“ಗುರುಪುರ ಬಂಟರ ಮಾತೃಸಂಘದ ದಶಮಾನೋತ್ಸವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆದಿರುವುದು, ಸಂಘದ ವ್ಯಾಪ್ತಿಯ 16 ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನ್ಯಸಮಾಜದ 100 ವಿದ್ಯಾರ್ಥಿಗಳಿಗೆ ಗೌರವ ಧನ ವಿತರಣೆ ಹಾಗೂ ಕಳೆದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನೆಯನ್ನು ನೀಡುವ ಕಾರ್ಯಕ್ರಮ ಮತ್ತು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಸುಮಾರು 20 ತಂಡಗಳ ‘ನೃತ್ಯ ಸ್ಪರ್ಧಾ ಕಾರ್ಯಕ್ರಮ’ದ ಸಂಯೋಜನೆ ಅದ್ಭುತ ಹಾಗೂ ಇತರ ಸಂಘಗಳಿಗೆ ಮಾದರಿ” ಎಂದು ಹೇಳಿ ಗುರುಪುರ ಬಂಟರ ಸಂಘವನ್ನು ಅಭಿನಂದಿಸಿದರು.
ವಿದ್ಯಾರ್ಥಿ ವೇತನ ವಿತರಣೆಯನ್ನು ಮಾಡಿದ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಇವರು ಮಾತನಾಡಿ “ಕಟ್ಟಡ ನಿರ್ಮಾಣದಲ್ಲಿ ಸ್ವಲ್ಪ ತಡವಾಗಿದೆ ಆದರೂ ಸಮಾಜದ ಸರ್ವರನ್ನು ಸೇರಿಸಿಕೊಂಡು ಭವನವನ್ನು ನಿರ್ಮಾಣ ಮಾಡುವುದಕ್ಕೆ ಅಧ್ಯಕ್ಷನಾಗಿ ಸಿದ್ಧನಾಗಿದ್ದೇನೆ” ಎಂದು ನುಡಿದರು. ಈ ವರ್ಷ ಬಂಟ್ಸ್ಹಾಸ್ಟೆಲ್ನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸರ್ವರೂ ಭಾಗಿಗಳಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಗುರುಪುರ ಬಂಟರ ಸಂಘದ ಕಾರ್ಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಹುಬ್ಬಳ್ಳಿ ಧಾರವಾಡದ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸುಗ್ಗಿ ಸುಧಾಕರ ಶೆಟ್ಟಿಯವರು “ಗುರುಪುರ ಬಂಟರ ಮಾತೃಸಂಘದ ಯೋಜನೆ ಹಾಗೂ ಯೋಚನೆಗಳು ಅದ್ಭುತ. ನನ್ನ ಬದುಕಿನಲ್ಲಿ ಬಂಟ ಸಮಾಜದ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದರೂ, 2ನೇ ಬಾರಿ ಇಂತಹ ಅಮೋಘ ಕಾರ್ಯಕ್ರಮವನ್ನು ನೋಡಿ ಸಂತೋಷಪಟ್ಟಿದ್ದೇನೆ. ಇದಕ್ಕಾಗಿ ಗುರುಪುರ ಬಂಟರ ಸಂಘವನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಶ್ರೀಯುತರು ಒಂದು ವಿದ್ಯಾರ್ಥಿನಿಯ ವಿದ್ಯಾಭ್ಯಾಸದ ಖರ್ಚನ್ನು ನೀಡಿ ಸಹಕರಿಸಿರುತ್ತಾರೆ. ವೇದಿಕೆಯಲ್ಲಿ ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಅಧ್ಯಕ್ಷ ಶ್ರೀ ರಾಕೇಶ್ ಶೆಟ್ಟಿ, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಶ್ರೀ ವೇಣುಗೋಪಾಲ್ ಶೆಟ್ಟಿ, ಮುಂಬಯಿ ಚಿಣ್ಣರಬಿಂಬದ ಶ್ರೀ ವಿಜಯ ಕುಮಾರ್ ಶೆಟ್ಟಿ ತೋನ್ಸೆ ಸಂಧರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಂಬಳ ಹಾಗೂ ಕೃಷಿ ಕ್ಷೇತ್ರದಲ್ಲಿ ಅಗ್ರಮಾನ್ಯ ಸಾಧನೆಯನ್ನು ಮಾಡಿದ ವಾಮಂಜೂರು, ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಕಂಬಳದ ರುವಾರಿ ಹಾಗೂ ಸ್ಥಾಪಕಾಧ್ಯಕ್ಷರಾದ ಶ್ರೀ ನವೀನ್ಚಂದ್ರ ಆಳ್ವ ತಿರುವೈಲುಗುತ್ತು ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶ್ರೀ ರವಿರಾಜ್ ಶೆಟ್ಟಿ, ನಿಟ್ಟೆಗುತ್ತು, ಶ್ರೀ ರಘು ಶೆಟ್ಟಿ, ಬೆಳ್ಳೂರುಗುತ್ತು, ಶ್ರೀ ದೇವಿಚರಣ್ ಶೆಟ್ಟಿ, ಮಂಗಳೂರು, ಲಯನ್ ಸಂಜಿತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಸುದರ್ಶನ್ ಶೆಟ್ಟಿ, ಪೆರ್ಮಂಕಿ ಸ್ವಾಗತಿಸಿ, ಶ್ರೀ ಪ್ರವೀಣ್ ಆಳ್ವ ಗುಂಡ್ಯ ವಂದಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ಶ್ರೀ ವಿವೇಕ ಚೈತನ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಬಂಟರ ಯಾನೆ ನಾಡವರ ಸಂಘ ಮಂಗಳೂರಿನ ಸಂಚಾಲಕರಾದ ಶ್ರೀ ವಸಂತ್ ಶೆಟ್ಟಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಪಂಕಜ ಶೆಟ್ಟಿ, ಅದ್ಯಪಾಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಮಂಜುನಾಥ ಭಂಡಾರಿ, ಪುಣೆಯ ಹೋಟೆಲ್ ಉದ್ಯಮಿ ಶ್ರೀ ಯಶವಂತ ಶೆಟ್ಟಿ, ಪ್ರಗತಿಪರ ಕೃಷಿಕರಾದ ಶ್ರೀ ರಾಜೇಂದ್ರ ಮೆಂಡ, ಮೊಗರು, ಶ್ರೀ ಸುಭಾಷ್ ಭಂಡಾರಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಶ್ರೀ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತುರವರು ಸ್ವಾಗತಿಸಿದರು, ಶ್ರೀ ಹರಿಕೇಶ್ ಶೆಟ್ಟಿ, ನಡಿಗುತ್ತು ವಂದಿಸಿದರು. ಶ್ರೀ ಪುರುಷೋತ್ತಮ ಭಂಡಾರಿ ಹಾಗೂ ಶ್ರೀಮತಿ ಅರ್ಪಿತಾ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
ಗುರುಪುರ ಬಂಟರ ಮಾತೃಸಂಘದ ‘ದಶಮಾನೋತ್ಸವ’ದ ಅಂಗವಾಗಿ ನಡೆದ “ಯುವ ಸಂಭ್ರಮ 2023 ಅಂತರ್ ಬಂಟರ ಸಂಘಗಳ “ನೃತ್ಯ ಸ್ಪರ್ಧೆ”ಯಲ್ಲಿ 20 ತಂಡಗಳು ಸ್ಪರ್ಧಿಸಿದ್ದು, ಪ್ರಥಮ ಸ್ಥಾನವನ್ನು ಬಂಟ್ವಾಳ ಬಂಟರ ಸಂಘ, ದ್ವಿತೀಯ ಸ್ಥಾನವನ್ನು ಜಪ್ಪಿನಮೊಗರು ಬಂಟರ ಸಂಘ, ತೃತೀಯ ಸ್ಥಾನವನ್ನು ಜಪ್ಪು ಬಂಟರ ಸಂಘ, ಚತುರ್ಥ ಸ್ಥಾನವನ್ನು ಉಳ್ಳಾಲ ಬಂಟರ ಸಂಘ ಹಾಗೂ ಸಮಧಾನಕರ ಬಹುಮಾನವನ್ನು ಕಾಪು ಬಂಟರ ಸಂಘ ಹಾಗೂ ಶಿಸ್ತುಬದ್ಧ ತಂಡವಾಗಿ ಸುರತ್ಕಲ್ ಬಂಟರ ಸಂಘಗಳು ಪ್ರಶಸ್ತಿಯನ್ನು ಪಡೆದವು.