ಮುಂಬಯಿ:- ಚಿಣ್ಣರಬಿಂಬದ ಇಪ್ಪತ್ತನೆಯ ವರ್ಷದ ಮಕ್ಕಳ ಉತ್ಸವವು ದಿನಾಂಕ 19/2/2023ರ ಭಾನುವಾರದಂದು ಬೆಳಿಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಕ್ಕಳ ಉತ್ಸವವನ್ನು ಶ್ರೀ ಸಿ.ಟಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ ಮುಂಬಯಿ ಸಂಸದರಾದ ಮಾನ್ಯ ಶ್ರೀ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ ಗ್ರೂಪ್ ಇದರ ಸಂಸ್ಥಾಪಕ ಕಾರ್ಯಾಧ್ಯಕ್ಷರಾಗಿರುವ ಶ್ರೀ ಕೆ. ಪ್ರಕಾಶ್ ಶೆಟ್ಟಿ ಇವರು ಆಗಮಿಸಲಿದ್ದಾರೆ.
ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾಗಿರುವ ಶ್ರೀ ಐಕಳ ಹರೀಶ್ ಶೆಟ್ಟಿ, ವಿ.ಕೆ ಗ್ರೂಪ್ನ ಆಡಳಿತ ನಿರ್ದೇಶಕರಾಗಿರುವ ಕೆ.ಎಂ.ಶೆಟ್ಟಿ, ರಾಕ್ಷಿ ಡೆವಲಪರ್ಸ್ ಪ್ರೈ.ಲಿ ಇದರ ನಿದೇಶಕರಾಗಿರುವ ಶ್ರೀ ರಾಜೇಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ನಿರ್ದೇಶಕರಾಗಿರುವ ಪ್ರವೀಣ್ ಭೋಜ ಶೆಟ್ಟಿ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀ ಆನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ನಿನ ಅಧ್ಯಕ್ಷರಾಗಿರುವ ಶ್ರೀ ಹರೀಶ್ ಅಮೀನ್, ತ್ರಿವೇಣಿ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸರ್ವೀಸಸ್. ಲಿ ಇದರ ನಿರ್ದೇಶಕರಾಗಿರುವ ಸಿ.ಎ ಎನ್. ಬಿ.ಶೆಟ್ಟಿ ಇವರು ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ವಿಶೇಷ ಆಕರ್ಷಣೆಯಾಗಿ ಬಾಲಿವುಡ್ ತಾರೆಯರಾದ ಜಾಕ್ಲಿನ್ ಫೆರ್ನಾಂಡೀಸ್, ಅರ್ಜುನ್ ರಾಮಪಾಲ್, ಅಹನ್ ಶೆಟ್ಟಿ, ಭಾರತೀಯ ಕ್ರಿಕೆಟಿಗ ಧವಲ್ ಕುಲಕರ್ಣಿ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಅಂದು ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳು, ಪಾಲಕರ ಸಮೂಹಗಾಯನ ಹಾಗೂ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ. ಅದ್ದೂರಿಯಾಗಿ ನಡೆಯಲಿರುವ ಇಪ್ಪತ್ತನೆಯ ವರ್ಷದ ಚಿಣ್ಣರ ಈ ಸಂಭ್ರಮದ ಕಾರ್ಯಕ್ರಮಕ್ಕೆ ತುಳು ಕನ್ನಡಿಗರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕಾಗಿ ಚಿಣ್ಣರಬಿಂಬದ ರೂವಾರಿ ಶ್ರೀ ಪ್ರಕಾಶ್ ಭಂಡಾರಿ, ಸ್ಥಾಪಕಾಧ್ಯಕ್ಷೆ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ನಯನಾ ಪ್ರಕಾಶ್ ಭಂಡಾರಿ, ಚಿಣ್ಣರಬಿಂಬದ ಟ್ರಸ್ಟಿಗಳು, ಚಿಣ್ಣರಬಿಂಬದ ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ. ದಿನಪೂರ್ತಿ ನಡೆಯುವ ಈ ಕಾರ್ಯಕ್ರಮವು ಭ್ರಾಮರಿ ಸುದ್ದಿ ವಾಹಿನಿಯಲ್ಲಿ, ಜೈಮಹಾರಾಷ್ಟ್ರ ಮರಾಠಿ ಚಾನೆಲ್ನಲ್ಲಿ ನಮ್ಮ ಟಿ.ವಿ, ಪಬ್ಲಿಕ್ ಟಿ.ವಿ, ಯೂಟ್ಯೂಬ್, ಫೇಸ್ಬುಕ್ನಲ್ಲಿ ನೇರ ಪ್ರಸಾರವೂ ಇದ್ದು ದೂರದೂರಿನ ಆಸಕ್ತರೆಲ್ಲರೂ ವೀಕ್ಷಿಸಬೇಕಾಗಿ ವಿನಂತಿ.
ಕಾರ್ಯಕ್ರಮದ ವಿಶಿಷ್ಟತೆ:- ಚಿಣ್ಣರಬಿಂಬದ ಚಿಣ್ಣರ ಸ್ಪರ್ಧೆಗಳು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಬಿಂಬಿಸುವಂತದ್ದಾಗಿರುತ್ತದೆ. ಚಿಣ್ಣರು ಸೊಗಸಾಗಿ ಭಜನೆಯನ್ನು ಹಾಡಬಲ್ಲರು. ಅಚ್ಚಕನ್ನಡದಲ್ಲಿ ಸ್ಪಷ್ಟ ಮಾತುಗಳ ಮೂಲಕ ಚರ್ಚೆ, ಭಾಷಣವನ್ನು ಮಾಡಿ ನೆರೆದ ಜನರು ಹುಬ್ಬೇರಿಸುವಂತೆ ಮಾಡುವ ಸಾಮಥ್ರ್ಯ ಚಿಣ್ಣರಬಿಂಬದ ಮಕ್ಕಳಲ್ಲಿ ಇದೆ. ಅವರು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಭಾವಗೀತೆ, ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಬಲ್ಲರು. ನಮ್ಮ ನಾಡಿನ ಕವಿಗಳನ್ನು, ಸಾಹಿತಿಗಳನ್ನು ಕೂಡಾ ಚಿಣ್ಣರಿಗೆ ಪರಿಚಯಿಸಿ, ಅವರನ್ನು ಸ್ಮರಿಸುವ ಕಾರ್ಯವನ್ನು ಚಿಣ್ಣರಬಿಂಬ ಮಾಡುತ್ತಿದೆ. ಸಿನೆಮಾ ಹಾಡು, ನೃತ್ಯದ ಅಬ್ಬರವಿರುವ ಪ್ರಸ್ತುತ ಕಾಲಮಾನದಲ್ಲಿ ಕೇವಲ ಜಾನಪದ ನೃತ್ಯಕ್ಕಷ್ಟೇ ಅವಕಾಶವಿದ್ದು ಚಿಣ್ಣರಲ್ಲಿ ನಮ್ಮ ನಾಡಿನ ಜಾನಪದ ವೈಭವವನ್ನು ತಿಳಿಸುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣುತ್ತಿದೆ. ಮಕ್ಕಳಲ್ಲಿ ಸುಪ್ತವಾಗಿ ಅಡಗಿದ್ದ ಅಭಿನಯ ಕೌಶಲವನ್ನು ಹೊರತರುವಲ್ಲಿ ಕಿರು ನಾಟಕ, ಯಕ್ಷಗಾನಗಳು ಸಹಕರಿಸುತ್ತಿವೆ. ಈ ಎಲ್ಲಾ ಸ್ಪರ್ಧೆಗಳು ಉತ್ತಮ ರೀತಿಯಲ್ಲಿ ನಡೆಯುವಲ್ಲಿ ಪಾಲಕರು, ತರಬೇತುದಾರರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.