ಸಿಎ ಸುರೇಂದ್ರ ಕೆ ಶೆಟ್ಟಿಯವರು ಮುಂಬಯಿ ನಗರದ ಉದ್ಯಮಿಗಳು, ಸಂಘಟಕರು ಹಾಗೂ ಕಲಾವಿದರಿಗೆ ಚಿರಪರಿಚಿತರು. ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಸುಖ ಕಷ್ಟ ವಿಚಾರಿಸುವ ಸಜ್ಜನ. ಆದರೆ ಶಿಸ್ತಿನ ಸಿಪಾಯಿ. ವಿದ್ಯಾರ್ಥಿ ದೆಸೆಯಿಂದಲೇ ಕುಶಾಗ್ರಮತಿಯಾಗಿದ್ದ ಕಾರಣ ಆ ಕಾಲಕ್ಕೆ ತುಂಬಾ ಜಟಿಲವೆಂಬ ಭಾವನೆಯಿದ್ದ ಸಿಎ ಪದವಿಯನ್ನು ನಿರಾಯಾಸವಾಗಿ ಗಳಿಸಿದ ಮೇಧಾವಿ. ಸಾಹಿತ್ಯ ಸಂಸ್ಕೃತಿ ಪ್ರೇಮಿ, ಯಕ್ಷಗಾನ ಕಲೋಪಾಸಕ, ಹವ್ಯಾಸಿ ಕಲಾವಿದ.
ಕವಿ ಮುದ್ದಣನ ಜನ್ಮಭೂಮಿ ಹಾಗೂ ಆದಿ ಆಲಡೆ ಇರುವ ಪುಣ್ಯಭೂಮಿ ನಂದಳಿಕೆ ಕ್ಷೇತ್ರ ಸುರೇಂದ್ರ ಶೆಟ್ಟಿ ಅವರ ತೀರ್ಥರೂಪರ ಮನೆತನ ಇರುವ ಸ್ಥಳ. ಇಲ್ಲಿನ ಕೊರಗಬೆಟ್ಟು ಕುಟ್ಟಿ ಲೋಕಯ್ಯ ಶೆಟ್ಟಿ ಹಾಗೂ ಬೇಲಾಡಿ ತಂಕರ ಬೆಟ್ಟು ಮನೆತನದ ಶ್ರೀಮತಿ ಕೃಷ್ಣಿ ಕೆ ಶೆಟ್ಟಿ ದಂಪತಿಯರ ಮುದ್ದಿನ ಮಗನಾಗಿ ಜನಿಸಿದ ಸುರೇಂದ್ರ ಶೆಟ್ಟರು ಎಳವೆಯಿಂದಲೇ ಉತ್ತಮ ಶಿಸ್ತನ್ನು ಪಾಲಿಸಿಕೊಂಡು ಬರುತ್ತಾ ಕ್ರಮೇಣ ಓರ್ವ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಎಂಬಂತೆ ಶಾಲಾ ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಗುರುತಿಸಿಕೊಂಡರು. ತನ್ನ ಉದ್ಯೋಗದಲ್ಲಿ ಶಿಸ್ತು, ಸಮಯಪ್ರಜ್ಞೆ, ಸಕಾಲಿಕ ನಿರ್ಧಾರ, ನಿಗದಿತ ಅವಧಿಯೊಳಗೆ ಕರ್ತವ್ಯ ಪೂರೈಸಿ ಕೊಡುವ ಉದ್ಯೋಗ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜ ಬಾಂಧವರ ನಿರಂತರ ಸಂಪರ್ಕಗಳ ಕಾರಣ ಸುರೇಂದ್ರ ಶೆಟ್ಟಿ ಅವರು ಇಂದು ಮುಂಬಯಿ ಮಹಾನಗರದಲ್ಲಿ ಓರ್ವ ಯಶಸ್ವಿ ಜನಪ್ರಿಯ ಬಹುಬೇಡಿಕೆಯ ಲೆಕ್ಕ ಪರಿಶೋಧಕರಾಗಿ ಗುರುತಿಸಿಕೊಳ್ಳುವುದರ ಜೊತೆಗೆ, ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ತುಳುವ ನೆಲಮೂಲದ ಜಾನಪದ, ಸಂಸ್ಕೃತಿ ಪ್ರೇಮಿಯಾಗಿ, ಯಕ್ಷಗಾನ ಹವ್ಯಾಸಿ ಕಲಾವಿದನಾಗಿ, ಓರ್ವ ಸಮರ್ಥ ಸಂಘಟಕನಾಗಿಯೂ ಪ್ರಸಿದ್ಧಿ ಪಡೆದರು.
ಸುರೇಂದ್ರ ಶೆಟ್ಟಿ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬೇಲಾಡಿ ಪ್ರಾಥಮಿಕ ಶಾಲೆಯಲ್ಲಿ ಪಡೆಯುತ್ತಿರುವ ವೇಳೆ ಅವರಿಗೆ ಶಿಕ್ಷಕರಾಗಿದ್ದ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ ಭಾಜನರೂ ಆಗಿದ್ದ ಬೆಲಾಡಿ ವಿಠಲ ಶೆಟ್ಟಿ ಅವರು ಸುರೇಂದ್ರ ಶೆಟ್ಟಿ ಅವರ ಸುಪ್ತಪ್ರತಿಭೆ ಹಾಗೂ ಪಾಠೇತರ ಚಟುವಟಿಕೆಗಳಲ್ಲಿ ಅವರಿಗಿದ್ದ ಆಸಕ್ತಿಯನ್ನು ಸಕಾಲದಲ್ಲಿ ಗುರುತಿಸಿ ಪ್ರತಿಭೆಯನ್ನು ಅನಾವರಣಗೊಳಿಸಿದ ಫಲಶ್ರುತಿಯೋ ಎಂಬಂತೆ ಶಿಕ್ಷಣ ಜೀವನದ ಭದ್ರಬುನಾದಿ ದೊರೆತು ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಓರ್ವ ಸಮರ್ಥ ವಿದ್ಯಾರ್ಥಿ ನಾಯಕನಾಗಿ ಹೊರ ಹೊಮ್ಮಿದರು. ಮುಂದಿನ ಶಿಕ್ಷಣ ಕಾರ್ಕಳ ಭುವನೇಂದ್ರ ಶಿಕ್ಷಣ ಸಂಸ್ಥೆಗಳ ಮೂಲಕ ಪೂರೈಸಿದರು. ತನ್ನ ವಾಣಿಜ್ಯ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದ ಅವರು ಮುಂದಿನ ಔದ್ಯೋಗಿಕ ಜೀವನಕ್ಕೆ ಪೂರಕವಾಗ ಬಲ್ಲ ಸಿಎ ವಿಶೇಷ ಪದವಿ ಶಿಕ್ಷಣ ಪಡೆದು ಅದರಲ್ಲಿ ಯಶಸ್ಸನ್ನು ಸಂಪಾದಿಸಿದರು.
ಮುಂಬಯಿ ನಗರಕ್ಕೆ ಉದ್ಯೋಗಾಕಾಂಕ್ಷಿಯಾಗಿ ಬಂದಿದ್ದ ಸುರೇಂದ್ರ ಶೆಟ್ಟಿ ಅವರು ಇಲ್ಲಿನ ಪಿ.ಎ. ತೇಲಿ ಎಂಡ್ ಕಂ. ಸೇರಿಕೊಂಡು ಸಿ.ಎ. ಪದವಿ ಪೂರ್ಣಗೊಳಿಸಿದ ಬಳಿಕ ನಗರದ ಮಲಾಡ್ ನಲ್ಲಿ ತನ್ನದೇ ಆದ ಎಸ್.ಕೆ.ಶೆಟ್ಟಿ ಎಂಡ್ ಕಂ. ಲೆಕ್ಕ ಪರಿಶೋಧಕ ಸಂಸ್ಥೆಯನ್ನು ಆರಂಭಿಸಿದರು. ತನ್ನ ದಕ್ಷತೆ, ವಿಶ್ವಾಸಾರ್ಹತೆ, ಸಜ್ಜನಿಕೆಗಳಿಂದ ಅನತಿ ಅವಧಿಯಲ್ಲಿ ಸಾಕಷ್ಟು ಸಂಪರ್ಕಗಳಿಸಿ ಇಲ್ಲಿನ ವ್ಯಾಪಾರ, ವ್ಯವಹಾರ, ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳು ಇವರ ಸಲಹೆ ಮಾರ್ಗದರ್ಶನ ಪಡೆಯತೊಡಗಿದರು. ತನ್ನ ವಹಿವಾಟುಗಳು ಭದ್ರನೆಲೆ ಪಡೆದ ಮೇಲೆ ಗೃಹಸ್ಥಾಶ್ರಮ ಪ್ರವೇಶಿಸಿದ ಶೆಟ್ಟರ ಸಂಸಾರ ಜೀವನಕ್ಕೆ ಮಲಾಡ್
ಪಶ್ಚಿಮದ ಅರುಣಾ ರಿಫ್ರೆಶ್ ಮೆಂಟ್ಇದರ ಮಾಲಿಕರಾದ ದಿವಂಗತ ಹಿರಿಯಣ್ಣ ಶೆಟ್ರ ಸುಪುತ್ರಿ ಪ್ರಭಾ ಅವರು ಬಾಳ ಸಂಗಾತಿಯಾಗಿ ಪ್ರವೇಶಿಸಿ, ಸುರೇಂದ್ರ ಶೆಟ್ಟರ ಜೀವನ ನೆಮ್ಮದಿಯಿಂದ ಸಾಗುತ್ತಿರುವಾಗ ಶಮಿಕಾ ಎಂಬ ಹೆಣ್ಣು ಹಾಗೂ ಸಿಎ ಸಾರ್ಥಕ್ ಎಂಬ ಗಂಡು ಮುದ್ದು ಮುದ್ದಾದ ಎರಡು ಸಂತಾನ ಭಾಗ್ಯ ಪಡೆದು ಗೃಹಸ್ಥ ಜೀವನ ಸಾರ್ಥಕತೆ ಕಂಡಿತು ಎಂಬಲ್ಲಿಗೆ ಸುರೇಂದ್ರ ಶೆಟ್ಟಿ ಅವರ ಸಾಧನೆಯ ಕತೆ ಮುಗಿಯುವುದಿಲ್ಲ. ಮಗಳು ಶಮಿಕಾ ಶೆಟ್ಟಿ ಮದುವೆಯಾಗಿ ಗಂಡನೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ತನ್ನ ಬಾಲ್ಯದ ದಿನಗಳಿಂದಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದಿದ್ದ ಇವರು ಮುಂದೆ 1991 ರಲ್ಲಿ ನಗರದ ಹೆಸರಾಂತ ಬಂಟರ ಸಂಘಟನೆ ಬಾಂಬೇ ಬಂಟ್ಸ್ ಅಸೋಸಿಯೇಶನ್ ಮುಂಬಯಿ ಇದರ ಅಧಿಕೃತ ಲೆಕ್ಕ ಪರಿಶೋಧಕರಾಗಿ ನೇಮಿಸಲ್ಪಟ್ಟು ಸಂಸ್ಥೆಯ ಸಮುದಾಯ ಸೇವಾ ಚಟುವಟಿಕೆಗಳಿಂದ ಪ್ರಭಾವಿತರಾಗಿ ಅದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದರು. ಈ ವೇಳೆಗೆ ಶೆಟ್ಟರ ವಿಶೇಷ ಸಂಘಟನಾ ಸಾಮರ್ಥ್ಯವೂ ಬೆಳಕಿಗೆ ಬರತೊಡಗಿತು. ಹದಿನೆಂಟು ವರ್ಷಗಳ ಕಾಲದ ಸುದೀರ್ಘಾವಧಿ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ ಬಳಿಕ ಸಂಸ್ಥೆಯ ಸೇವಾ ಕಾರ್ಯಗಳಿಂದ ಪ್ರಭಾವಿತರಾದ ಇವರು ಎರಡು ವರ್ಷಗಳ ಕಾಲ ಅದರ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಂತರದ ದಿನಗಳಲ್ಲಿ ಪದೋನ್ನತಿ ಹೊಂದಿದ ಇವರು ಅನೇಕ ಮಹತ್ವದ ಸ್ಥಾನಗಳನ್ನು ಅಲಂಕರಿಸಿ ಸಂಸ್ಥೆಯ ಮುಖಾಂತರ ಹೆಚ್ಚಿನ ಸಮಾಜ ಬಾಂಧವರಿಗೆ ಪರಿಚಿತರಾದರು. ಸಾಣೂರಿನ ವಾಣಿ ಯಕ್ಷಗಾನ ಮಂಡಳಿಯಲ್ಲಿ ದಿ.ಶ್ರೀಧರ ಪಾಂಡಿಯವರ ತರಬೇತಿ ಮಾರ್ಗದರ್ಶನಗಳ ಮುಖೇನ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಭಾಗವಹಿಸಿದ್ದ ಕಾರಣ ನಗರದ ವ್ಯಸ್ಥ ಜೀವನದ ಮಧ್ಯೆಯೂ ಸಮಯ ಹೊಂದಿಸಿಕೊಂಡು ತನ್ನ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನಗಳಲ್ಲಿಯೂ ಅತಿಥಿ ಕಲಾವಿದನೆಂಬಂತೆ ಭಾಗವಹಿಸತೊಡಗಿದರು. ತಾನು ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯ ಹೆಸರಾಂತ ಕಲಾವಿದ ಅರ್ಥಧಾರಿ ದಿ. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರಿಂದ ಯಕ್ಷಗಾನದ ಕೆಲವು ಅಂಶಗಳ ಕುರಿತಂತೆ ಮಾರ್ಗದರ್ಶನ, ತರಬೇತಿ ಪಡೆದು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದ ಹೆಗ್ಗಳಿಕೆಯೂ ಇವರಿಗಿದೆ.
ಬೋಂಬೆ ಬಂಟ್ಸ್ ಎಸೋಸಿಯೇಶನ್ ನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ವಾರ್ಷಿಕೋತ್ಸವಗಳಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನ ಪ್ರಸಂಗಗಳ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ಹಿರಿಮೆ ಶೆಟ್ಟರಿಗಿದೆ. ಮಹಾನಗರದ ವಿವಿಧ ಸಂಘಟನೆಗಳ ಜೊತೆಗೆ ಸೌಹಾರ್ದ ಸಂಬಂಧವಿರಿಸಿಕೊಂಡು ಯಕ್ಷಗಾನ ಕಲೆ, ಕಲಾವಿದರಿಗೆ ಸಹಕಾರ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇವರು ಓರ್ವ ಅರ್ಥಧಾರಿಯಾಗಿ, ಉತ್ತಮ ಸಾಂದರ್ಭಿಕ ಭಾಷಣಗಾರರೂ ಆಗಿರುವ ಕಾರಣ ನಗರದ ಪ್ರತಿಷ್ಠಿತ ಸಂಘ ಸಂಸ್ಥೆಗಳು ಇವರನ್ನು ಭಾಷಣಗಾರ ಅತಿಥಿ ಎಂಬಂತೆ ಪ್ರೀತಿ ಪೂರ್ವಕ ಆಹ್ವಾನ ನೀಡುತ್ತಾರೆ. ಓರ್ವ ಮೇಧಾವಿ ಲೆಕ್ಕ ಪರಿಶೋಧಕರಾಗಿರುವ ಕಾರಣ ಸಿಎ ವ್ಯಾಸಂಗಾರ್ಥಿಗಳು ಶ್ರೀಯುತರ ತರಬೇತಿಯಡಿಯಲ್ಲಿ ವ್ಯಾಸಂಗ ಮುಂದುವರಿಸುತ್ತಾರಲ್ಲದೇ ವೃತ್ತಿಪರ ಅನುಭವಗಳಿಸಿಕೊಳ್ಳುತ್ತಾರೆ.
ಪ್ರಸ್ತುತ ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಅಧ್ಯಕ್ಷ ಸ್ಥಾನದಲ್ಲಿರುವ ಶೆಟ್ಟಿ ಅವರು ತನ್ನ ಅಧಿಕಾರಾವಧಿಯಲ್ಲಿ ಅನೇಕ ಅರ್ಥಪೂರ್ಣ ಸಾಂಸ್ಕೃತಿಕ ಕಲಾಪ್ರಧಾನ ಕಾರ್ಯಕ್ರಮಗಳನ್ನು ಸಂಯೋಜಿಸಿ ಸಮಾಜ ಬಾಂಧವರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇವರ ಅವಧಿಯಲ್ಲಿ ಸಂಸ್ಥೆಯ ಕೀರ್ತಿ ಮತ್ತಷ್ಟು ಬೆಳಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹೀಗೆ ಓರ್ವ ಸಮರ್ಥ ಸಂಘಟಕನಾಗಿ, ಕಲಾರಾಧಕನಾಗಿ, ಕಲಾಪೋಷಕ, ಹವ್ಯಾಸಿ ಕಲಾವಿದನಾಗಿ, ಸಮಾಜಸೇವಕನಾಗಿ, ಸಭ್ಯ ನಾಗರಿಕನಾಗಿ ಗುರುತಿಸಿಕೊಂಡಿರುವ ಸುರೇಂದ್ರ ಕೆ ಶೆಟ್ಟಿ ಅವರ ಜನಪ್ರಿಯತೆ ಇನ್ನಷ್ಟು ಬೆಳಗಲಿ. ಅವರ ಸಾಂಸಾರಿಕ ಜೀವನ ಸುಖ ಸಮೃದ್ಧಿಗಳಿಂದ ಕೂಡಿರಲಿ. ಸಾಮಾಜಿಕ ಚಟುವಟಿಕೆಗಳು ಕಲಾವ್ಯವಸಾಯ ಇನ್ನಷ್ಟು ತೀವ್ರಗತಿ ಪಡೆಯಲಿ. ಆಯುಷ್ಯ ವೃದ್ಧಿಸಲಿ. ಆರೋಗ್ಯ ಸ್ಥಿರವಿರಲಿ. ಅವರಿಂದ ಇನ್ನಷ್ಟು ಸೇವೆ ಸಮಾಜಕ್ಕೆ, ಸಮುದಾಯಕ್ಕೆ ಲಭ್ಯವಾಗಲಿ ಎಂದು ವಿಶ್ವಬಂಟರ ಸಾಧನೆಗಳ ಅನಾವರಣ ಸೇವಾನಿರತ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಶುಭ ಹಾರೈಕೆಗಳು.
ಶುಭವಿರಲಿ ಸರ್ವರಿಗೆ ಜೈ ಶ್ರೀರಾಮ್.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು