ಬ್ರಹ್ಮಾವರದ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಷ್ಠಿತ ಚರ್ಚಾ ಸ್ಪರ್ಧೆ ವರ್ಬೆಟಲ್ ಡಿಬೇಟ್ ಚಾಂಪಿಯನ್ಶಿಪ್ ಕರ್ನಾಟಕ 2026ರಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಜುಲೈ ೮ ರಿಂದ ಆಗಸ್ಟ್ ೨೦ ರವರೆಗೆ ವಿವಿಧ ಹಂತಗಳಲ್ಲಿ ಸ್ಪರ್ಧೆಗಳು ನಡೆದಿದ್ದು ಅಂತಿಮವಾಗಿ ರಾಜ್ಯದ ನಾನಾ ಭಾಗಗಳಿಂದ ೮೧ ತಂಡಗಳು ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಜಿ.ಎಮ್ ನ ನಾಲ್ಕು ತಂಡಗಳು ಆಯ್ಕೆಯಾಗಿದ್ದು, ತಮ್ಮ ಚಿಂತನಾ ಹಾಗೂ ಸಂವಹನ ಕೌಶಲ್ಯಗಳನ್ನು ಅನಾವರಣಗೊಳಿಸಿದರು. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಪರೀಕ್ಷಿತ್ ಪಿ ಶೆಟ್ಟಿ, ಸುಪಾಶ್ ಎ ಶೆಟ್ಟಿ ಪ್ರಥಮ ಸ್ಥಾನದ ಜೊತೆಗೆ ೧ ಲಕ್ಷ ನಗದು ಬಹುಮಾನ, ಒಂಬತ್ತನೇ ತರಗತಿಯ ಸನಿಹ ಬಿ, ನಿಹಾರಿಕಾ ಸುಬ್ರಹ್ಮಣ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.
ಮಕ್ಕಳ ಈ ಅಭೂತಪೂರ್ವ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮುಕ್ತಕಂಠದಿಂದ ಪ್ರಶಂಸಿಸಿ ವಿಜೇತರಿಗೆ, ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ, ಸಹಕರಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


















































































































