ಕಾರ್ಗಿಲ್ ವೀರರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ ನಗರದ ಸಪ್ತಗಿರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮಂಜುನಾಥ್ ಗಡಿಗುಡಾಳ್ ಮತ್ತು ರಾಮಮೂರ್ತಿ ಸಿ ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಿ, ಅಮರ್ ಜವಾನ್ ಉದ್ಯಾನವನವನ್ನು ತಲುಪಿದರು. ನಂತರ ಕೆ.ಎಸ್.ಎನ್.ಎಸ್ ಭವನದಲ್ಲಿ 27ನೇ ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಏರ್ಪಡಿಸಲಾಗಿತ್ತು. ಸಪ್ತಗಿರಿ ವಿದ್ಯಾಲಯದ ವಿದ್ಯಾರ್ಥಿನಿಯರು ಆಡಿದ ‘ಕಾರ್ಗಿಲ್ ಕಿ ವೀರ್ ಜವಾನೋ’ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಅದೇ ವಿದ್ಯಾಲಯದ ವಿದ್ಯಾರ್ಥಿಗಳು ಪ್ರೇಕ್ಷಕರಲ್ಲಿ ಸ್ಪೂರ್ತಿ ತುಂಬುವ ಹಾಗೂ ಕಾರ್ಗಿಲ್ ನ ಮಹಾನ್ ವೀರರಿಗೆ ಗೌರವ ಸಲ್ಲಿಸುವಂತಹ ನೃತ್ಯ ಪ್ರದರ್ಶನವನ್ನು ನೀಡಿದರು. ಅನಿತಾ ರವೀಂದ್ರನಾಥ್ ಅವರು ಇಂತಹ ವೀರರನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ, ವೀರರಿಂದ ಸ್ಫೂರ್ತಿ ಪಡೆಯುವಂತೆ ಮತ್ತು ಅವರನ್ನು ತಮ್ಮ ನೈಜ ಜೀವನದ ನಾಯಕರನ್ನಾಗಿ ಪರಿಗಣಿಸುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಸೈನಿಕರಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿರುವ ನಿವೃತ್ತ ಶಿಕ್ಷಕರು ಆದ ದಯಾಮರಣ ಹೋರಾಟಗಾರ್ತಿ ಶ್ರೀಮತಿ ಕರಿಬಸಮ್ಮ ಅವರನ್ನು ಗೌರವಿಸಲಾಯಿತು. ನಂತರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಶುಭಾಶಯ ಸಂದೇಶವನ್ನು ಓದಲಾಯಿತು. ಅವರು ಕಾರ್ಗಿಲ್ ವೀರರ ಧೈರ್ಯವನ್ನು ಶ್ಲಾಘಿಸಿದರು. ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಕಾರ್ಗಿಲ್ ಯುದ್ಧದ ಕುರಿತಾದ ಪುಸ್ತಕಗಳನ್ನು ಒದಗಿಸುವುದಾಗಿ ಸಂಸದರು ಭರವಸೆ ನೀಡಿದರು. ಲೆಫ್ಟಿನೆಂಟ್ ಕರ್ನಲ್ ಅಕ್ಷಯ್ ಕುಮಾರ್ ಅವರು ಕಾರ್ಗಿಲ್ ವೀರ ವಿಕ್ರಮ್ ಬಾತ್ರಾ ಅವರಿಂದ ತಾವೆಷ್ಟು ಪ್ರಭಾವಿತರಾಗಿದ್ದಾರೆ ಎಂಬುದನ್ನು ವಿವರಿಸಿದರು. ಮಂಜ ನಾಯ್ಕ ವಂದಿಸಿದರು.


















































































































