
ಬೆಂಗಳೂರು ಬಂಟರ ಸಂಘವು ಸಮಾಜದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬೆಂಗಳೂರು ಬಂಟರ ಸಂಘದ ಪ್ರಸ್ತುತ ಪದಾಧಿಕಾರಿಗಳ ಆಡಳಿತಾವಧಿ ಮುಗಿಯುತ್ತಿದ್ದು, 2026-28 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಸಲ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಯ ಹಿಂದೆ ಹಲವಾರು ಘಟಾನುಘಟಿಗಳು ಪ್ರಯತ್ನಿಸುತ್ತಿದ್ದು, ಡಾ| ದೀಪಕ್ ಶೆಟ್ಟಿ ಹೀಗಾಗಲೇ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ದೀಪಕ್ ಶೆಟ್ಟರಿಗೆ ಪ್ರತಿಸ್ಪರ್ಧಿಯಾಗಿ ಮಹಿಳಾ ಉದ್ಯಮಿ ಶ್ರೀಮತಿ ಕಾಂತಿ ಶೆಟ್ಟಿಯವರು ಕೂಡಾ ಸಜ್ಜಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.


ಕಾಂತಿ ಶೆಟ್ಟಿಯವರು ಈ ಹಿಂದಿನ ಚುನಾವಣೆಗಳಲ್ಲಿ ಗೆದ್ದು ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಜೊತೆ ಕಾರ್ಯದರ್ಶಿಯಾಗಿ, ಮಹಿಳಾ ಉಪಾಧ್ಯಕ್ಷೆಯಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಸಮಾಜ ಸೇವೆಯಲ್ಲಿಯೂ ಸೈ ಎನಿಸಿಕೊಂಡಿರುವ ಕಾಂತಿ ಶೆಟ್ಟಿಯವರು ಸಂಘದ ಅಭಿವೃದ್ಧಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೇರ, ನಿಷ್ಪಕ್ಷಪಾತ ಮತ್ತು ಕರ್ತವ್ಯನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ. ಶ್ರೀಮತಿ ಸುಶೀಲ ಪಿ ಶೆಟ್ಟಿಯವರ ನಂತರ ಈವರೆಗೆ ಬೆಂಗಳೂರು ಬಂಟರ ಸಂಘವು ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ.





























































































































