
ನಾವು ಎಲ್ಲೇ ಇದ್ದರೂ, ಎಷ್ಟೇ ವಿದ್ಯಾವಂತರಾದರೂ ನಮ್ಮ ನಾಡಿನ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೇ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಉದ್ಯೋಗ ನಿಮಿತ್ತ ಹೊರದೇಶಕ್ಕೆ ಹೋದರೂ ತಂದೆ ತಾಯಿಯ ಸೇವೆ ಮಾಡುತ್ತಿರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಮ್ಮ ಹೃದಯ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಇಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಸೇರಿ ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿರುವುದು ಸ್ತುತ್ಯಾರ್ಹ. ಮನುಷ್ಯ ಮನುಷ್ಯನ ನಡುವಿನ ಈ ಅನ್ಯೋನ್ಯ ಪ್ರೀತಿಯೇ ಮಾನವೀಯ ಸಂಬಂಧ. ನಾನು ನಿಮ್ಮವನು ನೀವೆಲ್ಲಾ ನಮ್ಮವರು ಎಂಬ ಭಾವನೆ ನಮ್ಮ ಬಳಿ ಇರಬೇಕು. ಈ ಪ್ರೀತಿಯೇ ಸೌಹಾರ್ದತೆಯ ಮೂಲ ಮಂತ್ರ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷ ಸಿ.ಎ ಸುರೇಂದ್ರ ಕೆ ಶೆಟ್ಟಿ ಹೇಳಿದರು. ನಾಸಿಕ್ ನ ಹೋಟೆಲ್ ಮಸಾಲ ಜೋನ್ ಸಭಾಭವನದಲ್ಲಿ ನಡೆದ ನಾಸಿಕ್ ಬಂಟರ ಸಂಘದ 20ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಸಿಕ್ ಬಂಟರ ಸಂಘದ ಅಧ್ಯಕ್ಷ ರಾಮಚಂದ್ರ ಶೆಟ್ಟಿ ಅವರು ಮಾತನಾಡಿ, ಬಂದ ದಾರಿಯನ್ನು ಮರೆಯದೆ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳನ್ನು ತಿಳಿಸಿ ಸುಸಂಸ್ಕೃತ ರನ್ನಾಗಿ ಬೆಳೆಸುವ ಕಾರ್ಯ ನಮ್ಮದಾಗಬೇಕು. ಯುವಕರನ್ನು ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ನಮ್ಮ ಹಿರಿಯರು ಕಂಡಂತಹ ಸಂಘದ ಭವನ, ಶಿಕ್ಷಣ ಸಂಸ್ಥೆ ಆದಷ್ಟು ಬೇಗ ನಿರ್ಮಾಣಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಸುರೇಂದ್ರ ಕೆ ಶೆಟ್ಟಿ ಅವರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು. ನಾಸಿಕ್ ಬಂಟರ ಸಂಘದ ಸಂಸ್ಥಾಪಕ ಅಧ್ಯಕ್ಷ ಕೊಡೆತ್ತೂರು ಗುತ್ತು ಲಿಂಗಪ್ಪ ಕೆ ಶೆಟ್ಟಿ, ಸಲಹಾ ಸಮಿತಿ ಸದಸ್ಯ ಮಾಜಿ ಅಧ್ಯಕ್ಷ ರಾಜಗೋಪಾಲ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಗೌರವ ಕೋಶಾಧಿಕಾರಿ ಅಮಿತ್ ಎಲ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ವಿ ಶೆಟ್ಟಿ ಉಪಸ್ಥಿತರಿದ್ದರು.
ಸಂಘ ನಡೆಸಿದ ವಾರ್ಷಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಆಟೊಟ ಸ್ಪರ್ಧೆಗಳಲ್ಲಿ ವಿಜೇತರಾದ ಸಮಾಜದ ಸ್ಪರ್ಧಿಗಳಿಗೆ ಅತಿಥಿ ಗಣ್ಯರು ಬಹುಮಾನ ನೀಡಿ ಅಭಿನಂದಿಸಿದರು. ರವೀಂದ್ರ ಕೆ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಯಕ್ಷ ಗುರು ರಾಜಶೇಖರ್ ಉಚ್ಚಿಲ್ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ತಂಡಗಳ ಟ್ರೋಫಿಗಳನ್ನು ನಗ್ರಿಗುತ್ತು ರೋಹಿತ್ ಶೆಟ್ಟಿ ಪ್ರಾಯೋಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಪ್ರತಿಭಾನ್ವಿತ ಕಲಾವಿದರಿಂದ ಮತ್ತು ಸದಸ್ಯರಿಂದ ಶಿವಶಕ್ತಿ ಸಂಗಮ ನೃತ್ಯ ವೈಭವ ಮತ್ತು ಬ್ರಾಹ್ಮರಿ ತಂಡ ಮಹಾತ್ಮನಗರ ಇವರಿಂದ ಪರಿ ಲೀಲಾಮೃತ ಎಂಬ ನೃತ್ಯರೂಪಕ, ಇನ್ನಿತರ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಪ್ರದೀಪ್ ಕೆ ರೈ, ಜ್ಯೋತಿ ಸತೀಶ್ ಶೆಟ್ಟಿ, ತನ್ವಿ ಧೀರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಪ್ರಮೋದ್ ಶೆಟ್ಟಿ, ಸಂಘದ ಸದಸ್ಯರು ಮತ್ತು ಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

























































































































