
ತೋಕೂರು ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ ಹಾಗೂ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ಬಂಡಿ ನೇಮೋತ್ಸವ ‘ಕನಿಲದಾಯನ’ ಮಾರ್ಚ್ 1 ರಿಂದ 4 ರವರೆಗೆ ಜರುಗಲಿದೆ. ಫೆಬ್ರವರಿ 25 ರಂದು ನೂತನ ಬಂಡಿಗಳ ಸಮರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಸಂಜೆ 4 ಗಂಟೆಗೆ ಬಂಡಿಯ ಮೆರವಣಿಗೆ ಸುರತ್ಕಲ್ ಜಂಕ್ಷನ್ ನಿಂದ ಹೊರಟು ತೋಕೂರು ಕನಿಲ ದೈವಸ್ಥಾನಕ್ಕೆ ಆಗಮಿಸಿ ಬಂಡಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1 ರಂದು ಬೆಳಿಗ್ಗೆ 9 ಗಂಟೆಗೆ ನವಕ ಪ್ರಧಾನ ಮತ್ತು ರಾತ್ರಿ 9 ಗಂಟೆಗೆ ಕುಡುಂಬೂರು ಗುತ್ತಿನಿಂದ ದೈವಸ್ಥಾನದವರೆಗೆ ‘ಭಂಡಾರ’ ಮೆರವಣಿಗೆ ಮೂಲಕ ಹೊರಡಲಿದೆ. ಮಾರ್ಚ್ 2 ರಂದು ರಾತ್ರಿ 9 ಗಂಟೆಗೆ ಮೈಸಂದಾಯ, ಕಾಂತೇರಿ ಧೂಮಾವತಿ ಬಂಟ ಮತ್ತು ಬೊಬ್ಬರ್ಯ ದೈವಗಳಿಗೆ ನೇಮೋತ್ಸವ ಹಾಗೂ ಬಂಡಿ ಉತ್ಸವ ಜರುಗಲಿದೆ. ಮಾರ್ಚ್ 3 ರಂದು ರಾತ್ರಿ 9 ಗಂಟೆಗೆ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ನೇಮೋತ್ಸವ ಮತ್ತು ಬಂಡಿ ಉತ್ಸವ ನೆರವೇರಲಿದೆ. ಮಾರ್ಚ್ 4 ರಂದು ರಾತ್ರಿ 8 ಗಂಟೆಗೆ ಪಡಿಯರಿ ದರ್ಶನ ನಡೆಯಲಿದ್ದು, ರಾತ್ರಿ 10 ಗಂಟೆಗೆ ಪಿಲಿಚಾಮುಂಡಿ ನೇಮೋತ್ಸವ ನಡೆಯಲಿದೆ. ಅಂದು ರಾತ್ರಿ ಸಾರ್ವಜನಿಕರಿಗೆ ಮಹಾಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.




ಅದೇ ರೀತಿ ಕ್ಷೇತ್ರದ ನಾಗದೇವತೆಗಳ ಸಂತೃಪ್ತಿ ಪ್ರಯುಕ್ತ ಮಾರ್ಚ್ 6 ರಂದು ಬೆಳಿಗ್ಗೆ 11.30 ಕ್ಕೆ ಆಶ್ಲೇಷ ಪೂಜೆ, ಮಾರ್ಚ್ 7 ರಂದು ವೆಂಕಟರಮಣ ದೇವರ ಮುಡಿಪು ಕಾಣಿಕೆ, ವಾರ್ಷಿಕ ಪೂಜೆಗಳು ನಡೆಯಲಿದೆ. ಬಂಡಿ ನೇಮೋತ್ಸವ ‘ಕನಿಲದಾಯನ’ಕ್ಕೆ ಸಾರ್ವಜನಿಕರು, ಕುಟುಂಬಸ್ಥರು ಕ್ಲಪ್ತ ಸಮಯದಲ್ಲಿ ಉಪಸ್ಥಿತರಿದ್ದು, ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕಾರಣಿಕದ ದೈವಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆನುವಂಶಿಕ ಆಡಳಿತ ಮೊಕ್ತೇಸರರಾದ ಗುತ್ತಿನಾರ್ ಕುಡುಂಬೂರು ಗುತ್ತು ಜಯರಾಮ ಶೆಟ್ಟಿ, ಆಡಳಿತ ಸಮಿತಿ ಹಾಗೂ ಹತ್ತು ಸಮಸ್ತರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

























































































































